ಔವೆನ್ಬ್ರುಗ್ಗರ್, ಲಿಯೋಪಾಲ್ಡ್‌ ಜೋಸೆಫ್, ಫಾನ್: 1722-1809. ಎದೆಯ ಮೇಲೆ ಬೆರಳುಗಳಿಂದ ಬಡಿದು ತಿಳಿವ ರೋಗನಿದಾನ ವಿಧಾನವನ್ನು ತೋರಿಸಿಕೊಟ್ಟ ವಿಯನ್ನದ ವೈದ್ಯ. ಅಲ್ಲಿನ ಆಸ್ಪತ್ರೆಯಲ್ಲಿದ್ದಾಗ ಇಂಥ ಪ್ರಯೋಗಗಳನ್ನು ನಡೆಸಿ ಒಳಗಿರುವ ಅಂಗಗಳ ಸ್ಥಿತಿಯನ್ನು ಅರಿವುದನ್ನು ಕಂಡುಕೊಂಡು ಒಂದು ಕಿರುಹೊತ್ತಗೆಯನ್ನು ಪ್ರಕಟಿಸಿದ (1761). ಈತ ಸಾಯುವುದಕ್ಕೆ ಒಂದು ವರ್ಷ ಮೊದಲು (1808) ಕಾರ್ವಿಸಾರ್ಟ್ ಆ ಪುಸ್ತಕವನ್ನು ಫ್ರೆಂಚ್ ನುಡಿಗೆ ಇಳಿಸುವ ತನಕವೂ ಇದನ್ನು ಬಹುಪಾಲು ಯಾರೂ ಗಮನಿಸಿರಲಿಲ್ಲ. ಇದಲ್ಲದೆ ಗುಂಡಿಗೆಯ ಸುತ್ತಲೂ ಅದರ ಕವಚದೊಳಗಡೆ ನೀರು ತುಂಬಿಕೊಂಡಾಗ ಹೊಟ್ಟೆಮುಗುಳು (ಎಪಿಗ್ಯಾಸ್ಟ್ರಿಯಂ) ಉಬ್ಬಿಕೊಂಡಿರುವ ಚಿಹ್ನೆಯನ್ನೂ ಈತ ವಿವರಿಸಿದ್ದಾನೆ.	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ